ವಿಶಾಲಮ್ಮನ ನಾಯಿಮರಿಗಳು
ವಿಶಾಲಮ್ಮ ಹೆಸರಿಗೆ ತಕ್ಕಂತೆ ವಿಶಾಲವಾಗಿ ಬೆಳೆದು ಸುಮಾರು ನೂರು ವರ್ಷ ಹಳೆಯದಾದ ಮನೆಯ ಬಾಗಿಲುಗಳನ್ನು ಎತ್ತರಿಸಬೇಕಾಗಿ ಬರದಿದ್ದರೂ ಸ್ವಲ್ಪ ಅಗಲಿಸಿದ್ದರೆ ಚೆನ್ನಾಗಿತ್ತೇನೋ ಎಂಬ ಸಂದೇಹವನ್ನ ನೋಡಿದವರ ಮನದಲ್ಲಿ ಮೂಡಿಸುತ್ತಿದ್ದುದು ಸಹಜವೇ! ಅವರೇನು ಮೊದಲೆಲ್ಲ ಹೀಗಿದ್ದವರಲ್ಲ. ಮದುವೆಯಾಗಿ ಬಂದ ಹೊಸತರಲ್ಲಿ “ಕೂಸು ಎಷ್ಟು ಚೊಲೋ ಇದ್ದು!” ಎಂದು ಊರವರು ಹೇಳುತ್ತಿದುದುಂಟು. ಕಾಯ ಎಷ್ಟು ವಿಶಾಲವೋ, ಹೃದಯವೂ ಅಷ್ಟೇ. ತನಗೆ ಮಕ್ಕಳಿಲ್ಲ ಎಂಬ ಕೊರಗನ್ನು ನಾಯಿಯೊಂದನ್ನು ಸಾಕಿಕೊಂಡು ನೀಗಿಸಿಕೊಂಡಿದ್ದರು.
ಗಂಡ ಸತ್ತು ಹೋಗಿ ಸುಮಾರು ಹತ್ತು ವರ್ಷಗಳಿಂದ ಒಬ್ಬರೇ ಇರುತ್ತಿದ್ದ ಅವರ ಜೀವನಕ್ಕೆ ತನ್ನ ಅಣ್ಣನ ಹಿರಿಯ ಮಗ ರಾಜೀವ ಶಾಲೆಗೆ ಹೋಗಲೆಂದು ಬಂದು ಉಳಿದುಕೊಂಡಾಗ ಒಬ್ಬರು ಜೊತೆಗೆ ಸಿಕ್ಕಂತಾಯಿತು. ಮಗನನ್ನು ಎಂಟನೇ ತರಗತಿಗೆ ಸೇರಿಸಿ ಬಿಟ್ಟು ಹೋಗಲು ಬಂದ ತನ್ನ ಅಣ್ಣ “ಎಷ್ಟು ದಿನ ಹಿಂಗೆ ಒಬ್ಬವನೇ ಇರ್ತೆ ಹೇಳು. ಅಲ್ಲೇ ಬಂದು ಎಂಗಳ ಸಂತಿಗೇ ಇಪ್ಪಲ್ಲೇ ಬತ್ತಿಲ್ಯ?” ಎಂದು ಎಷ್ಟು ಕೇಳಿದರೂ ವಿಶಾಲಮ್ಮ ಮಾತ್ರ ಜಗ್ಗಲಿಲ್ಲ. “ಇಲ್ಲೆಂತ ಕಡ್ಮೆ ಇದ್ದು ಹೇಳು ಎಂಗೆ?” ಎಂದು ಮಾತು ಹಾರಿಸಿದ್ದರು.
ರಾಜೀವ ಓದುವುದರಲ್ಲಿ ಚುರುಕು ಆದರೆ ಸ್ವಭಾವದಲ್ಲಿ ಸ್ವಲ್ಪ ಥಂಡು. ಯಾರಲ್ಲೂ ಅಷ್ಟೇನೂ ಬೆರೆಯುವವನಲ್ಲ. ಇವರೇನೋ ಅಣ್ಣನ ಮಗನನ್ನು ತನ್ನ ಸ್ವಂತ ಮಗನೆಂದುಕೊಂಡು ಮುದ್ದಿಸಿದರೂ, ಅವನು ಮಾತ್ರ ಅತ್ತೆ ವಿಶಾಲಮ್ಮನಲ್ಲೂ ಮಾತು ಕಡಿಮೆಯೇ. ಆದರೆ ವಿಶಾಲಮ್ಮನ ಮನೆಗಿಂತ ವಿಶಾಲವಾದ ಅವರ ಹಿತ್ತಿಲನ್ನು ಕಂಡು ಅವನಿಗೆ ಹಿಗ್ಗೋ ಹಿಗ್ಗು. ಬಂದ ಶುರುವಿನಲ್ಲಿ ಎಲ್ಲೆಲ್ಲಿಂದಲೋ ಏನೇನೋ ಗಿಡ ಗಂಟಿಗಳನ್ನು ತಂದು, ನೆಟ್ಟು, ನೀರು ಹಾಕಿ ಪಾಲಿಸುವನು. ವಿಶಾಲಮ್ಮ ಎಂದೂ ಬೇಡವೆಂದಿಲ್ಲ. ಬೇಡವೆನ್ನಲು ಇದೇನು ಕೆಟ್ಟ ಚಟವೇ? ಆದರೆ ರಾಜೀವ ನೆಟ್ಟ ಗಿಡಗಳನ್ನು ನೋಡುವರೇ ಹೊರತು ತಾವು ಎಂದೂ ನಿರಾಗಲೀ ಗೊಬ್ಬರವಾಗಲೀ ಹಾಕಿದವರಲ್ಲ.
ರಾಜೀವನಿಗೆ ನಾಯಿಗಳೆಂದರೆ ಕೂಡ ಅಷ್ಟೇ ಇಷ್ಟ. ಶಾಲೆಯಿಂದ ಬಂದವನು ಏನೋ ಚೂರು ತಿಂದು ಅದರ ಜೋತೆ ಆಡುವನು. ಅವನು ತೋಟಕ್ಕೆ ಹೊರಟರೆ, ಮೋತಿ ಕೂಡ ಬೆಂಬಿಡದ ಬಾಲದಂತೆ ಅವನನ್ನು ಹಿಂಬಾಲಿಸುವುದು. ದೀಪಾವಳಿ ಮುಗಿದು ಒಂದು ವಾರವಾಗಿತ್ತಷ್ಟೇ? ಮೋತಿ ಐದು ಪುಟ್ಟ ಪುಟ್ಟ ಮರಿಗಳನ್ನು ಹಡೆದಿದ್ದಳು. ವಿಶಾಲಮ್ಮನಿಗೇನೋ ಮತ್ತೆ ದೀಪಾವಳಿ ಬಂದಷ್ಟೇ ಸಂಭ್ರಮ. ಮರಿಗಳ ವಾಗತಿ ಮಾಡುವುದರಲ್ಲೇ ದಿನ ಕಳೆದು ಹೋಗುತ್ತಿದ್ದವು. ಹದಿನೈದೋ ಇಪ್ಪತ್ತೋ ದಿನದೊಳಗೆಲ್ಲ ಮರಿಗಳು ಕಣ್ಣು ತೆರೆದು ತಾಯಿಯನ್ನು ಬಿಟ್ಟು ಒಲಾಡುತ್ತಾ ಆಚೀಚೆ ಓಡಾಡಲು ಪ್ರಾರಂಭಿಸಿದ್ದವು. ರಾಜೀವನಿಗೆ ಅವುಗಳನ್ನು ಎತ್ತಿ ಆಡಿಸುವುದರಲ್ಲೇ ಸಮಯ ಹೋಗುತ್ತಿತ್ತು. ಈ ಮಧ್ಯೆ ಅವನು ಹಿತ್ತಲ ಕಡೆಯೂ ಹೆಚ್ಚು ಹೋಗುತ್ತಿಲ್ಲ ಎನ್ನುವುದನ್ನು ಯಾವುದೇ ಹೊಸ ಗಿಡವನ್ನು ನೆಟ್ಟಿಲ್ಲವೆಂಬುದರಿಂದಲೂ, ಬಿಸಿಲಿಗೆ ಒಣಗುತ್ತಿರುವ ಎಲೆಗಳನ್ನು ನೋಡಿಯೂ ವಿಶಾಲಮ್ಮ ಅರಿತಿದ್ದರು. ಮರಿಗಳೊಂದಿಗಿನ ಆಟದಲ್ಲಿ ಗಿಡಗಳನ್ನು ಮರೆತಿದ್ದಾನೇನೋ ಎಂದುಕೊಂಡು ಸುಮ್ಮನಿದ್ದರು.
ಅದೊಂದು ಭಾನುವಾರ ಬೆಳಿಗ್ಗೆ ನಾಯಿಗಳಿಗೆ ಅನ್ನ ಹಾಲು ಹಾಕಲು ಬಂದವರು ಮರಿಯೊಂದು ಇಲ್ಲದಿದ್ದುದನ್ನು ನೋಡಿ ಅವಾಕ್ಕಾದರು! ಹಿಂದಿನ ದಿನ ರಾತ್ರಿ ಎಲ್ಲವೂ ಇದ್ದುವಲ್ಲವೇ? ಎಂದು ತಮ್ಮಲ್ಲಿ ತಾವೇ ಕೇಳಿಕೊಂಡು “ಶಣ್ಣಾ! ನೀ ಎಲ್ಲಾರೂ ನೋಡಿದ್ಯನ?” ಎಂದು ರಾಜೀವನನ್ನು ಕೂಗಿ ಕೇಳಿದರು. ಅವನು ಇಲ್ಲವೆಂದು ಗೋಣು ಅಲ್ಲಾಡಿಸಿ, ತೋಟದಲ್ಲಿ ನೋಡಿ ಬರುತ್ತೇನೆಂದು ಕಾಲುಕಿತ್ತನು. ಊರೆಲ್ಲ ಹುಡುಕಿದರೂ ಮರಿಯ ಪತ್ತೆ ಇಲ್ಲ! ವಿಶಾಲಮ್ಮನಿಗೆ ಎರಡು ದಿನ ಗಂಟಲಲ್ಲಿ ಅನ್ನ ಇಳಿಯಲಿಲ್ಲ. ಆದರೇನಂತೆ ಬೆಳೆಯುವ ಮಾಣಿ ರಾಜೀವ ಹಸಿದುಕೊಂಡಿರಬಾರದು ಎಂದು ಅಡುಗೆ ಮಾಡಿ, ತಾನೂ ಉಂಡ ಶಾಸ್ತ್ರ ಮಾಡಿ ಕೈ ತೊಳೆಯುವರು. ಅದೇ ದಿನ ಸಂಜೆ ಹಿತ್ತಲಲ್ಲಿ ಹೊಸ ಗಿಡ ನೆಟ್ಟಿದ್ದನ್ನು ನೋಡಿ, ಹುರುಪು ತಂದುಕೊಂಡು “ಸುಮಾರು ದಿನ ಆದ್ಮೇಲೆ ಗಿಡ ನೆಟ್ಟಿದ್ಯಲೊ” ಎಂದು ರಾಜೀವನಿಗೆ ಮೆಚ್ಚುಗೆ ಸೂಚಿಸಿದರು.
ಇದಾಗಿ ಸುಮಾರು ಹತ್ತು ದಿನ ಕಳೆದಿರಬೇಕು. ಇನ್ನೊಂದು ಮರಿಯೂ ಕಾಣೆಯಾಗಬೇಕೆ? ವಿಶಾಲಮ್ಮನಿಗೆ ದಿಗಿಲು ತಾಳಲಾರದು. ಬೆಳಿಗ್ಗೆ ಆಸರಿಗೆ ಕುಡಿದು ರಾಜೀವ ಶಾಲೆಗೆ ಹೋದ ಮೇಲೆ ಮನೆ ಕೆಲಸವೆಲ್ಲ ಮುಗಿದು ಜಗುಲಿಯ ಹೇಡಿಗೆಯ ಮೇಲೆ ಕವಳ ಹಾಕುತ್ತಾ ಮುಂದೇನು ಮಾಡುವುದೆಂದು ಚಿಂತಿಸುತ್ತಾ ಕೂತಿದ್ದರಷ್ಟೇ? ಆಚೆ ಮನೆ ಗಣಪತಿ “ವಿಶಾಲಕ್ಯ, ಒಂಚೂರು ತಂಬಾಕು ಕೊಡೆ ಮಾರಾಯ್ತಿ” ಎಂದು ಕೇಳುತ್ತಾ ಬಂದು ಹೇಡಿಗೆಯ ಇನ್ನೊಂದು ತುದಿಯ ಕಂಭಕ್ಕೆ ಒರಗಿಕೊಂಡು ಕುಳಿತನು. ವಿಶಾಲಮ್ಮ ಕವಳದ ಬಟ್ಟಲನ್ನು ಅವನೆಡೆಗೆ ತಳ್ಳಿ “ಇನ್ನೊಂದು ನಾಯಿ ಮರಿನೂ ಕಳ್ದೋತು ಮಾರಾಯ” ಎಂದು ಅಳಿಲು ತೋಡಿಕೊಂಡರು.
ಗಣಪತಿ, ಇದು ಕಿರುಬ ಹಿಡಿದುಕೊಂಡು ಹೋಗಿದ್ದೆ ಸೈ ಎಂದು ತಾನು ಕಣ್ಣಾರೆ ಕಂಡವನಂತೆ ಹೇಳಿ, ನಾಯಿಗಳಿಗೆ ಒಂದು ಬೋನು ಮಾಡಿಸುವುದೇ ಇದಕ್ಕೆಲ್ಲ ತಕ್ಕ ಪರಿಹಾರವೂ ಹಾಗೂ ಅದನ್ನು ತಾನೇ ಮಾಡಿಸಿಕೊಡುವುದಾಗಿಯೂ ಹೇಳಿ ಹೆಡಿಗೆಯಿಂದ ನೆಗೆದವನೇ ತನ್ನ ತೋಟದ ಹಾದಿ ಹಿಡಿದನು. ಇದಾಗಿ ಒಂದು ವಾರವಾದರೂ ಆಗಿರಬೇಕು? ಗಣಪತಿಯ ಕಾಲು ಈ ಕಡೆ ಸುಳಿದಿರಲಿಲ್ಲ. ನಿನ್ನೆ ರಾಜೀವನಿಗೆ ಸಿಕ್ಕವನು, ‘ಇನ್ನು ಎರಡೇ ದಿನಕ್ಕೆ ಬೋನು ರೆಡಿ’ ಎಂದು ಹೇಳಿ ಕಳಿಸಿದ್ದನಂತೆ. ಅಂದರೆ ನಾಳೆ ಬಂದುಬಿಡಬೇಕು ಎಂದುಕೊಂಡು ವಿಶಾಲಮ್ಮ ಸಮಾಧಾನ ತಂದುಕೊಂಡರು.
ಮರುದಿನ ಬೆಳಿಗ್ಗೆ ಏಳುತ್ತಲೇ ಏನೋ ಆತುರ. ಎಂದೂ ಇಲ್ಲದ ಇಂದು, ಎದ್ದವರೇ ಸೀದಾ ಹೇಡಿಗೆಯ ಮೇಲೆ ಮಲಗುವ ನಾಯಿ ಮರಿಗಳನ್ನು ನೋಡೋಣವೆಂದು ಜಗುಲಿಯ ಬಾಗಿಲು ತೆಗೆದರೆ, ಮೋತಿ ಕುಯ್ ಕುಯ್ಗುಡುತ್ತಾ ತನ್ನ ಕಾಲ ಸುತ್ತ ಸುಳಿಯುತ್ತಿದೆ. ನೋಡಿದರೆ ಇನ್ನೊಂದು ಮರಿಯೂ ಕಾಣೆ!
ಗರಬಡಿದವರಂತೆ ಕುಳಿತ ವಿಶಾಲಮ್ಮ ಏನೋ ನೆನಪಾದವರಂತೆ ಎದ್ದು ಹಿತ್ತಿಲ ಕಡೆ ನಡೆದರೆ ನಿನ್ನೆ ಸಂಜೆ ಇಲ್ಲದ ಹೊಸದೊಂದು ಗಿಡ. ಬೆನ್ನ ಹಿಂದೆ ಯಾರೋ ಬಂದಂತಾಗಿ ತಿರುಗಿ ನೋಡಿದರೆ ರಾಜೀವ ತನ್ನನ್ನೇ ದುರುಗುಟ್ಟಿಕೊಂಡು ನೋಡುತ್ತಿದ್ದಾನೆ ಎಂದು ಅರಿವಾಗಿ, ಕೈ ಕಾಲು ನಡುಗಿ, ನೆಲಕ್ಕೆ ಕುಸಿದು ಬಿದ್ದಿದ್ದೊಂದೇ ಗೊತ್ತು!