ಮಜ್ಜಿಗೆ ಕಪಾಟು

ಈ ಮಜ್ಜಿಗೆ ಕಪಾಟು ಎಂಬುದು ಯಾವ ಬಂಗಾರ ಇಡುವ ತಿಜೋರಿಗೇನೂ ಕಡಿಮೆ ಇಲ್ಲ! ಅದು ಹಾಗೆ ಎಲ್ಲರ ಕೈಗೆಲ್ಲ ಏಟುಕುವುದೂ ಅಲ್ಲ. ಹತ್ತು ಹದಿನೈದು ಜನ ಇರುವ ತುಂಬಿದ ಮನೆಯಲ್ಲಿ ಕೇವಲ ಇಬ್ಬರೋ ಮೂವರೋ ಹೆಂಗಸರು ಮಾತ್ರ ತೆಗೆದು ಹಾಕಲು ಅವಕಾಶವಿರುವ ಕಪಾಟಿದು. ಮಕ್ಕಳಂತೂ ಸುತಾರಾಂ ಹತ್ತಿರ ಸುಳಿಯುವ ಹಾಗೂ ಇಲ್ಲ. ಎಷ್ಟೆಂದರೂ ತುಪ್ಪ ಒಂದು ತರದಲ್ಲಿ ತಿನ್ನುವ ಬಂಗಾರವೇ ಅಲ್ಲವೇ?

ಈ ಹಳ್ಳಿಗಲ್ಲಿ ಇರುತ್ತಿದ್ದ ಮಜ್ಜಿಗೆ ಕಪಾಟು ಸಾಮಾನ್ಯವಾಗಿ ಮರದಿಂದ ಮಾಡಿದ್ದು. ಅದರಲ್ಲಿ ಹಾಲು ಮೊಸರಿನಾದಿಯಾಗಿ ಬೆಣ್ಣೆ ತುಪ್ಪಗಳು ಇದ್ದರೂ ಹೆಸರು ಮಾತ್ರ ಮಜ್ಜಿಗೆ ಕಪಾಟು ಎಂದೇ. ಮಜ್ಜಿಗೆಗೆ ಅಷ್ಟು ವಿಶೇಷ ಸ್ಥಾನ ಮಾನ! ಹಾಗೆಂದು ಇವಿಷ್ಟೇ ಹೊರತು ಅದರಲ್ಲಿ ಮತ್ತೇನೂ ಇಡುವಂತಿರಲಿಲ್ಲ. ಮಕ್ಕಳು ಎಂದಾದರೊಮ್ಮೆ ಅಮ್ಮ ಬ್ಯುಸಿ ಇದ್ದಾಗ ಗಡಿಬಿಡಿಯಲ್ಲಿ ಮಜ್ಜಿಗೆ ಕಪಾಟಿನ ಬಾಗಿಲು ತೆಗೆಯಲು ಹೋದರೆ ಅಡಿಗೆ ಮನೆಯಿಂದ ಅಮ್ಮ “ತಮ್ಮಾ, ನೀ ಕೈ ಹಾಕಡ. ಆನು ತೆಕ್ಕೊಡ್ತಿ!” ಎಂದು ಎಲ್ಲ ಕೆಲಸ ಅರ್ಧಕ್ಕ್ಕೇ ಬಿಟ್ಟು ಓಡಿಯೇ ಬರುವಳು.

“ಇವತ್ತು ಎಷ್ಟು ಜನ ಆಳ್ಗ ಬತ್ತಾ ಇದ್ದ?” ಎಂಬ ಪ್ರಶ್ನೆಯಿಂದ ಮಧ್ಯಾಹ್ನದ ಬಿಸಿಲಲ್ಲಿ ಕೆಲಸ ಮಾಡಿ ಬಂದವರಿಗೆ ‘ಕುಡಿಯಲು ಎಷ್ಟು ಮಜ್ಜಿಗೆ ತೆಗೆದಿಡಬೇಕು’, ‘ಊಟಕ್ಕೆ ಎಷ್ಟು ಬೇಕು’, ಬೆಳಿಗ್ಗೆ ಆಸರಿಗೆಗೆ ಉದ್ದಿನ ದೋಸೆಯಾದರೆ ‘ಜೋನಿ ಬೆಲ್ಲದ ಜೊತೆಗೆ ಎಷ್ಟು ತುಪ್ಪ ಬೇಕು’ ಎಂಬ ದೈನಂದಿನ ಲೆಕ್ಕಾಚಾರಗಳಿಂದ ಹಿಡಿದು, ತಿಂಗಳೊಳಗೆ ಬರುವ ದೊಡ್ಡ ಹಬ್ಬದ ಹೋಳಿಗೆಗೆ ಎಷ್ಟು ತುಪ್ಪ ಬೇಕು ಎಂಬ ದೂರಾಲೋಚನೆ ಉಳ್ಳ ಇನ್ವೆಂಟರಿ ಮ್ಯಾನೇಜ್ಮೆಂಟಿಗೆ ಕೇಂದ್ರಬಿಂದುವಾಗಿದ್ದಿದ್ದು ಇದೇ ಮಜ್ಜಿಗೆ ಕಪಾಟು. “ಚಂದ್ರು, ಆಕಳು ಎಂತಕ್ಕೋ ಹಾಲು ಕರೀತಾ ಇಲ್ಯೋ. ಈ ಸಲ ಹಬ್ಬಕ್ಕೆ ತಿಮ್ಮಪ್ಪಣ್ಣಯ್ಯನ ಮನೆಲ್ಲಾದ್ರೂ ಸ್ವಲ್ಪ ತುಪ್ಪ ಸಿಗ್ತಾ ಕೇಳು” ಎಂದು ಆಯಿ ಬೇಜಾರಲ್ಲಿ ಹೇಳುವಾಗ ಅವರು ತೆಗೆದುಕೊಳ್ಳುತ್ತಿದ್ದ ಸಪ್ಲೈ ಚೈನ್ ನಿರ್ಧಾರಗಳಿಗೆ ಸಾಕ್ಷಿಯಾಗಿ ನಿಂತಿದ್ದೂ ಇದೇ ಮಜ್ಜಿಗೆ ಕಪಾಟು.

ಇಂಥ ಮಜ್ಜಿಗೆ ಕಪಾಟು ಸಾಮಾನ್ಯವಾಗಿ ದೇವರ ಪೀಠದ ಪಕ್ಕದಲ್ಲೋ, ಇಲ್ಲಾ ದೇವರ ಎದುರಿನಲ್ಲೋ ಇರುತ್ತಿತ್ತು. ಯಾವುದಕ್ಕೂ ದೇವರು ಇದರ ಮೇಲೊಂದು ಕಣ್ಣಿಟ್ಟಿರಲಿ ಎಂದೋ ಅಥವಾ ದೇವರಷ್ಟೇ ಮುಖ್ಯವಾದ ಪಾತ್ರ ಇದಕ್ಕೂ ಇತ್ತೆಂದೋ ಗೊತ್ತಿಲ್ಲ. ಎಷ್ಟೆಂದರೂ ಹಿತ್ಲಾಕಡೆಯಿಂದ ಶುರುವಾಗಿ ಅಡಿಗೆ ಮನೆಯನ್ನು ಹಾದು ದೇವರ ಮನೆಯವರೆಗೆ ಹಬ್ಬಿರುವ ಈ ರಾಜ್ಯದಲ್ಲಿ ಮಜ್ಜಿಗೆ ಕಪಾಟೇ ತಾನೇ ದೊಡ್ಡ ಭಂಡಾರ?

ಹೀಗೆ ತನ್ನ ಜೀವನದಲ್ಲೂ ಅತಿ ಮುಖ್ಯ ಪಾತ್ರ ವಹಿಸಿದ್ದ, ಕೊನೆಗೂ ತನ್ನ ಸುಪರ್ದಿಗೆ ಬಂದಿದ್ದ ಖಜಾನೆಯಾದ ಮಜ್ಜಿಗೆ ಕಪಾಟನ್ನು ಬಿಟ್ಟು, ಊರೂರು ಸುತ್ತಿ, ಕೊನೆಗೆ “ಯೆಮ್ಮನೆ ತಮ್ಮ ಬೆಂಗ್ಳೂರಲ್ಲಿ ಮನೆ ಮಾಡಿದ್ದ. ಅಲ್ಲಿಗೇ ಬಂದ್ಬಿಡಿ ಹೇಳಿದ್ದ” ಎಂಬ ಸಂಭ್ರಮದಲ್ಲಿ ಬೆಂಗ್ಳೂರು ಸೇರಿದ ಅಮ್ಮನ ಮನಸಲ್ಲಿ “ಅಯ್ಯೋ! ಮಜ್ಜಿಗೆ ಕಪಾಟು ಊರಲ್ಲೇ ಉಳ್ದೋತು” ಎಂಬ ಒಂದು ಸಣ್ಣ ಸಂಕಟ ಇದ್ದಿದ್ದು ಮಾತ್ರ ಸುಳ್ಳಲ್ಲ. ಹಾಗಾಗೆ ಇರಬೇಕು ಇವತ್ತಿಗೂ ಈ ಫ್ರಿಜ್ಜನ್ನು ಅಮ್ಮ ಕರೆಯುವುದು ಮಾತ್ರ “ಮಜ್ಜಿಗೆ ಕಪಾಟು” ಎಂದೇ!

ಆದರೆ ಫ್ರಿಜ್ಜು ಮಜ್ಜಿಗೆ ಕಪಾಟಾಗಲು ಸಾಧ್ಯವೇ? ಫ್ರಿಜ್ಜಿಗಾದರೆ ಇಂಥದ್ದೇ ಎಂಬುದಿಲ್ಲ- ಬೆಳಿಗ್ಗೆ ಬಂದ ಹಾಲು, ತಿಂಗಳಿಗೊಮ್ಮೆ ತರುವ ಕಾಳು ಬೇಳೆಗಳಲ್ಲಿ ಒಂದೊಂದು ಪಾಲು, ವಾರಕ್ಕೊಮ್ಮೆ ತರುವ ತರಕಾರಿಗಳು, ಬೇಕೆನಿಸಿದಾಗ ಬಾಯಿ ಚಪಲಕ್ಕೆ ಬಿಗ್ ಬಾಸ್ಕೆಟ್ನಲ್ಲಿ ತರಿಸುವ ಸವರ್ಡೋ ಬ್ರೆಡ್ಡು, ‘ಪ್ರೋಟೀನು ಸಾಕಾಗ್ತಿಲ್ಲ’ ಎಂದು ಅಲವತ್ತುಕೊಂಡು ತರಿಸುವ ಪನೀರು, ಅಮೆರಿಕದಿಂದ ಬರುವವರು ತಂದುಕೊಟ್ಟ ಒಂದಷ್ಟು ಚಾಕ್ಲೆಟ್ಟು ಹೀಗೆ ಬೇಕಾಗಿದ್ದು ಬೇಡವಾಗಿದ್ದು ಎಲ್ಲವನ್ನೂ ತುಂಬುವುದು ಇದೆ ಫ್ರಿಜ್ಜಿನಲ್ಲಿ. ಹೀಗಾಗಿ ಅಮ್ಮನ ಈ ಬೆಂಗ್ಳೂರಿನ ಮಜ್ಜಿಗೆ ಕಪಾಟಿನಲ್ಲಿ ಮುಖ್ಯ ಅತಿಥಿ ಮಜ್ಜಿಗೆಗೇ ಮೈ ಕೊಸರಿಕೊಂಡು ಹೊರಗೆ ಒಳಗೆ ಓಡಾಡುವ ಗತಿ.

ಇಷ್ಟಾಗ್ಯೂ ಮಜ್ಜಿಗೆ ಏನು ಕಡಿಮೆಯೇ? ಫ್ರಿಜ್ಜಿನ ಒಂದಸ್ತಿನ ಹಿಂಬದಿ ಮೂಲೆಯಲ್ಲಿ ಮೊಸರಿನ ಲೋಟಕ್ಕೂ, ಮುಂಬದಿಯ ಸಣ್ಣ ಮೂಲೆಯಲ್ಲಿ ಚಹಾಕ್ಕೆ ಬೇಕು ಎಂದು ತೆಗೆದಿಟ್ಟುರುವ ಹಾಲಿನ ಲೋಟಕ್ಕೂ, ಕೊಟ್ಟೂ ಕೊಡದಂತ ಜಾಗ ಕೊಟ್ಟು, ಸುಮಾರು ಮುಕ್ಕಾಲುವಾಸಿಗೂ ಜಾಸ್ತಿ ಜಾಗವನ್ನು ಆಕ್ರಮಿಸುವಲ್ಲಿ ತಾನಂತೂ ಯಶಸ್ವಿಯಾಗಿದೆ.

ಈ ಹಾಲು, ತುಪ್ಪ, ಮಜ್ಜಿಗೆಗೆ ಸ್ವಲ್ಪ ಮಡಿ ಮೈಲಿಗೆ ಜಾಸ್ತಿ. ಈ ಫ್ರಿಜ್ಜು ಮಜ್ಜಿಗೆ ಕಪಾಟಿನಷ್ಟು ಸೂಕ್ತವಲ್ಲ ಎಂಬ ಭಾವನೆ ಅಮ್ಮನ ಮನಸ್ಸಿನಲ್ಲಿ ಇದ್ದೇ ಇದೆ. ‘ಬಂದ ಬಂದವರೆಲ್ಲ ಬಾಗಿಲು ತೆಗೆದು, ಬೇಕಾದ್ದು ಇಟ್ಟು ತೆಗೆದು, ಮನ ಬಂದಂತೆ ಬಳಸುವ ಇದಕ್ಕೆ ಮಜ್ಜಿಗೆ ಕಪಾಟಿನ ಗತ್ತೆಲ್ಲಿ ಬರಬೇಕು. ಹದಿನೈದು ದಿನಕ್ಕೊಮ್ಮೆ ನೀರು ಸೋರಿ ರಾಡಿ ಮಾಡಿಕೊಳ್ಳುವ, ಕರೆಂಟು ಹೋಯ್ತೆಂದರೆ ತನ್ನೊಳಗಿಟ್ಟ ಹಾಲು ಮಜ್ಜಿಗೆಯಾದಿಯಾಗಿ ತರಕಾರಿಗಳನ್ನೆಲ್ಲ ಹಾಳುಗೆಡಗುವ, ಮಾನ ಮರ್ಯಾದಿ ಇಲ್ಲದ ಫ್ರಿಜ್ಜೆಲ್ಲಿ, ಯಾವುದೇ ಕರೆಂಟಿನ ಅವಶ್ಯಕತೆಯೇ ಇಲ್ಲದ, ಬಿರು ಬೇಸಿಗೆಯಲ್ಲೂ ತಂಪಾಗಿಡುತ್ತಿದ್ದ ಮಜ್ಜಿಗೆ ಕಪಾಟೆಲ್ಲಿ. ಈ ಮುಸುಡಿಗೆ ಯಾವ ಯಾವುದೋ ಊರಿಂದ ತಂದು ಅಂಟಿಸಿಕೊಂಡ ಚಿತ್ರ ವಿಚಿತ್ರ ಮ್ಯಾಗ್ನೆಟ್ ಗಳ ಸಿಂಗಾರ ಬೇರೆ ಕೇಡು’ ಎಂದು ಅಮ್ಮನಿಗೆ ಅನಿಸಿದ್ದರೂ ಅಚ್ಚರಿ ಇಲ್ಲ. ಆದರೆ ಬೇರೆ ಗತಿ ಇಲ್ಲವೇ! ಇಪ್ಪತ್ತೈದು ವರ್ಷದ ಹಿಂದೆ ಮನೆ ಬಿಟ್ಟು ಹೊರಡುವಾಗ ಮಜ್ಜಿಗೆ ಕಪಾಟು ಹೋಗಲಿ, ನಾಲಕ್ಕು ದಿನಕ್ಕೆ ಬೇಕಾದ ಬಟ್ಟೆಯನ್ನಾದರೂ ತರುವಷ್ಟು ಅವಕಾಶವಿತ್ತೇ? ಉಟ್ಟ ಬಟ್ಟೆಯಲ್ಲಿ ಹೊರಟು ಬಂದಿದ್ದಲ್ಲವೇ? ಅದಕ್ಕೇ ಏನೋ, ಬೆಂಗ್ಳೂರಿಗೆ ಬಂದು ಹನ್ನೆರಡು ವರ್ಷವಾದರೂ ಅಮ್ಮ ಫ್ರಿಜ್ಜಿಗೆ ಮಜ್ಜಿಗೆ ಕಪಾಟು ಎಂದೇ ಕರೆಯುವುದು. ಬಿಟ್ಟೂ ಬಿಡಲಾರದ ಅಮ್ಮನ ಜೀವನದ ಅವಿಭಾಜ್ಯ ಅಂಗ. ಹಾಗೆ ಕರೆದಾಗಲೆಲ್ಲಾ ನಾವು ನಕ್ಕು ಅಮ್ಮನನ್ನು ಗೇಲಿ ಮಾಡುವುದೂ ಉಂಟು.

ಆದರೆ ಕಳೆದುಕೊಂಡಿದ್ದು ಬರೆ ಮಜ್ಜಿಗೆ ಕಪಾಟು ಮಾತ್ರ ಅಲ್ಲ, ಅದಕ್ಕೂ ಮಿಗಿಲಾಗಿ ಅದಿದ್ದ ಮನೆಯನ್ನು, ಅಲ್ಲಿನ ಸೊಗಡನ್ನು ಎಂದು ಅರಿವಾದಾಗ ಗಂಟಲು ಬಿಗಿಯಾಗಿ, ಕಣ್ಣಂಚಲ್ಲಿ ಹನಿಗೂಡುವುದು ಸುಳ್ಳೇ?