ಹಾಗೂ ಒಂದು ಕಾಲ ಇತ್ತು

ಹಾಗೂ ಒಂದು ಕಾಲ ಇತ್ತು,

ಮೂರೂ ಸಂಜೆ ಹೊತ್ತಲ್ಲಿ, ಅಪ್ಪ ಕೈ ಕಾಲು ಮುಖ ತೊಳೆದು
ಪ್ರಧಾನ ಬಾಗಿಲಿಗೆ ಊದುಬತ್ತಿ ಹಚ್ಚಿ, ದೇವರಿಗೆ ಸಾಷ್ಟಾಂಗ ಬಿದ್ದು
ಜಗುಲಿಯ ಕಂಬಳಿಯ ಮೇಲೆ ಮುಂಡಿಗೆಗೆ ಒರಗಿ ಕೂತು
ಭಾಮಿನಿ ಷಟ್ಪದಿಯಲ್ಲಿ ಬರೆದ ಕುಮಾರ ವ್ಯಾಸ ಭಾರತವನ್ನು ರಾಗವಾಗಿ ಹಾಡುತ್ತಿದ್ದರೆ
ಅರ್ಥವಾಗದಿದ್ದರೂ, ಮೈಮರೆತು ಕೂತು ಕೇಳುತ್ತಿದ್ದ ಒಂದು ಕಾಲ…

ಹಾಗೂ ಒಂದು ಕಾಲ ಇತ್ತು,

ಸಂಕಷ್ಟ ಹರ ಚೌತಿಯಂದು,
ಮಧ್ಯಾಹ್ನ ಊಟಕ್ಕೆ ತಡವಾದರೂ
ಅಮ್ಮ ಮಾಡಿದ ಮೋದಕ ಸಿಗುವುದೆಂದು ಎದುರು ನೋಡುತ್ತಾ
ಮಂಗಳಾರತಿಯ ವೇಳೆಗೆ ಜವಟೆಯ ಹೊಡೆದು
ಅಪ್ಪನ ಜೊತೆ, ಕೇಳಿ ಕೇಳಿಯೇ ಬಾಯಿಪಾಠವಾದ ಗಣಪತಿ ಉಪನಿಷತ್ತು ಹೇಳಿ
ಅಮ್ಮ ತನ್ನದೇ ರಾಗದಲ್ಲಿ ಹಾಡಿಕೊಳ್ಳುವ ದೇವರಲ್ಲಿ ಪ್ರಸಾದವನ್ನು ಬೇಡಿಕೊಳ್ಳುವ ಹಾಡುಗಳನ್ನು
ಕೇಳುತ್ತಿದ್ದ ಆ ಕಾಲ

ಹಾಗೂ ಒಂದು ಕಾಲ ಇತ್ತು

ಮಳೆಗಾಲ ಮುಗಿದು,
ಶರತ್ ಕಾಲದ ನವರಾತ್ರೆ ಶುರು ಆದಾಗ
ಒಂಭತ್ತೂ ದಿನ ಬೆಳಿಗ್ಗೆ ಆರಕ್ಕೇ ಎದ್ದು, ಮುಖ ತೊಳೆದು
ನಡುಗಿಸುವ ಚುಮು ಚುಮು ಚಳಿಯಲ್ಲಿ
೩ ಕಿಲೋ ಮೀಟರ್ ದೂರದ ಕೊರ್ಸೆ ಅಜ್ಜನ ಮನೆಗೆ ಹೋಗಿ
ಬುಟ್ಟಿಗಟ್ಟಲೆ ಬಿಳಿ ಕೆಂಪು ನೀಲಿ ಬಣ್ಣದ ಗೆಂಟಿಗೆ ಹೂವು ಕೊಯ್ದು ತಂದು
ಉದ್ದಕ್ಕೆ ಮಾಲೆ ಮಾಡಿ ಕೊಟ್ಟು
ಸಂಜೆ ಹೊತ್ತಿಗೆ ಆರತಿ ತಟ್ಟೆಗೆ ಅರಿಶಿನ ಕುಂಕುಮ ಹಾಕಿ
ತೇರು ಆರತಿಗೆ ಎಣ್ಣೆ ಬತ್ತಿಗಳನ್ನು ಜೋಡಿಸಿ ಕೊಟ್ಟು
ಅಪ್ಪ ಆರತಿ ಮಾಡುತ್ತಿದ್ದರೆ ಹುರುಪಿನಲ್ಲಿ ಜವಟೆ ಹೊಡೆದು ಶಂಖ ಊದಿ
ಬಗೆ ಬಗೆಯ ಪಾಯಸ ತಿಂದು ಮಲಗುತ್ತಿದ್ದ ಕಾಲ

ಹಾಗೂ ಒಂದು ಕಾಲ ಇತ್ತು,

ಬೂರೆ ಹಬ್ಬದ ದಿನ ಎಣ್ಣೆ ಸ್ನಾನ ಮಾಡಿ
ಅಪ್ಪ ಹೇಳುತ್ತಿದ್ದ ತನ್ನ ಬೂರೆ ಕಳುವಿನ ಕಥೆ ಕೇಳುತ್ತಾ
ನಾವೂ ಹಾಗೆ ಮಾಡಬೇಕೆಂದಾಗ ಬೈಸಿಕೊಳ್ಳುತ್ತಾ
ತೋಟದಿಂದ ತಂದ ಅಡಿಕೆ ಸಿಂಗಾರ ರೂಪದ ಬಲಿವೇಂದ್ರನ ದೇವರ ಮನೆಯಲ್ಲಿ ಒಪ್ಪಗೆ ಕೂರಿಸಿ
ದೊಡ್ಡ ಹಬ್ಬಕ್ಕೆ ಮಾಡುವ ಹೋಳಿಗೆಯನ್ನು ನೆನೆ ನೆನೆದು
ಹಬ್ಬದ ಬೆಳಿಗ್ಗೆ ಎಷ್ಟೇ ತಡವಾದರೂ ಗೋ ಪೂಜೆ ಮಾಡಿಯೇ
ಆಸರಿಗೆಗೆ ಅರಿಶಿನದ ದೋಸೆ ತಿಂದು
ಬಾಗಿಲು, ಅಕ್ಕಿಯ ಪಣತಕ್ಕೆಲ್ಲ ಅಪ್ಪ ಸುತ್ತು ಪೂಜೆ ಮಾಡುತ್ತಿದ್ದರೆ
ಅಮ್ಮ ಹಬ್ಬದ ಹಾಡುಗಳನ್ನು ಹಾಡುತ್ತಿದ್ದರೆ ಕೇಳುತ್ತ
ಸಂಜೆಯಾದರೆ ತೋಟದ ಬೇಲಿಗೆಲ್ಲ ಎಣ್ಣೆಯ ದೀಪ ಹಚ್ಚಿ ಬಲಿವೇಂದ್ರನ ಕಳಿಸಿ ಬಂದು
ಹಬ್ಬ ಹಾಡುವವರಿಗೆ ಕಾದು ಕೂತು ಅವರ ಕುಣಿತವ ನೋಡಿಯೇ ಮಲಗುವ ಕಾಲ…

ಹಾಗೂ ಒಂದು ಕಾಲ ಇತ್ತು,

ಮಳೆಗಾಲ ಮುಗಿದು ಅಂಗಳ ತುಂಬಾ ಬೆಳೆದ
ತಿಂಗಳಾವರೆ, ಸೌತೆ ಬಳ್ಳಿಯೆಲ್ಲವ ತೆಗೆದು
ಅಡಿಕೆ ಒಣಗಿಸಲು ಚೊಕ್ಕ ಮಾಡಿಟ್ಟ ಮೇಲೆ
ಊರಿನ ಮಕ್ಕಳಷ್ಟೇ ಅಲ್ಲದೆ ದೊಡ್ಡವರೂ ಸೇರಿ
ಅಂಗಳವನ್ನೇ ಉದ್ದಕ್ಕೆ ಕ್ರಿಕೆಟ್ ಪಿಚ್ ಮಾಡಿಕೊಂಡು
ಕತ್ತಲಾಗುವ ವರೆಗೂ ಆಡಿ
ದೊಡ್ಡವರೇ ಇದ್ದಾರಲ್ಲ ಬಯ್ಯುವವರು ಯಾರೆಂಬ ಮತ್ತಿನಲ್ಲಿ ಎತ್ತಿ ಹೊಡೆದ ಚೆಂಡು
ಹಂಚಿನ ಮನೆಯ ಮೇಲೆ ಟಣ್ ಎಂದು ಬಿದ್ದು ಹಂಚು ಒಡೆದಾಗ
ಸಪ್ಪಳಕೆ ಹೆದರಿ ಒಳಗಿಂದ ಓಡಿ ಬಂದ ಆಯಿಯೋ ಅಮ್ಮನೋ ಅಪ್ಪ ಕಾಕಂದಿರಿಗೆ ಬೈದಾಗ ಆಗುವ ಖುಷಿಯ ಮಧ್ಯೆಯೇ
ಅಂಗಳದ ಅಂಚಲ್ಲಿದ್ದ ಗಿಡ ಗಂಟಿಗಳ ಸಂದಿಗಳಲಿ ಚೆಂಡು ಕಳೆದರೂ ಯೋಚಿಸದೆ
ಮತ್ತೊಂದು ಚೆಂಡು ಕೊಡೆಂದು ಅಶೋಕಣ್ಣನ ಕೇಳಿ ತಂದು ಆಡಿಯೇ ತೀರುತ್ತಿದ್ದ ಕಾಲ…

ಹಾಗೂ ಒಂದು ಕಾಲ ಇತ್ತು…

ತನ್ನಿಷ್ಟದಂತೆ ಬರುವ ಬಸ್ಸಿಗೆ
ಬೆಳಿಗ್ಗೆಯೇ ಎದ್ದು ಬಿಸಿ ಬಿಸಿ ಹಂಡೆಯ ನೀರಲ್ಲಿ ಸ್ನಾನ ಮಾಡಿ
ಅಜ್ಜನ ಮನೆಗೆ ಹೋಗುವ ಸಂಭ್ರಮದಲ್ಲಿ
ಒಂಚೂರು ಗಂಟಲಲ್ಲಿ ಇಳಿಯದ ದೋಸೆಯನ್ನು ಒತ್ತಾಯಕ್ಕೆ ತುರುಕಿ ತಿಂದು
ಹೊಸ ಅಂಗಿ ಚೆಡ್ಡಿ ತೊಟ್ಟು ಓಡೋಡಿ ಹೋಗಿ
ಬಾರದ ಬಸ್ಸಿಗೆ ಕಾದೂ ಕಾದೂ,
"ಮಳೆಗಾಲ ಮುಗಿದರೂ ಬರದೇ ಇರಲು ಈ ಬಸ್ಸಿಗೆ ಎಂತ ರೋಗ" ಎಂದು
ಇಲ್ಲದ ಡಾಂಬರು ರಸ್ತೆಗೂ ಸೇರಿಸಿ ಶಾಪ ಹಾಕಿ
ಬಸ್ಸು ಬೈಲಗದ್ದೆಯಲ್ಲೇ ತಿರುಗಿ ವಾಪಸ್ ಹೋಯ್ತೆಂದು ಯಾರೋ ಸುದ್ದಿ ಮುಟ್ಟಿಸಿದಾಗ
ಹತ್ತು ಗಂಟೆಗೆ ಕೊಪ್ಪಕ್ಕೆ ಬರುವ ಬಸ್ಸಿಗಾಗಿ
ಸುಂಸಾಣಿ ಘಟ್ಟ ಹತ್ತಿ ಸಾಗುವಾನಿ ಕಾಡು ಹಾಸಿ
೫ ಕಿಲೋ ಮೀಟರ್ ನಡೆದೇ ಹೋಗಿ,
ಶಿರಸಿಗೆ ಹೋಗುವ ಬಸ್ಸು ಹತ್ತಿ ನಿಟ್ಟುಸಿರಿಟ್ಟು,
ಅಲ್ಲಿಂದ ಹಳದೋಟ ಕತ್ರಿಗೆ ತಲುಪಿ, ಕಾಲ್ನಡಿಗೆಯಲ್ಲಿ ಎರಡೆರಡು ಹೊಳೆ ದಾಟಿ
ಅಂತೂ ಇಂತೂ ಕತ್ತಲಾಗುವ ಹೊತ್ತಿಗೆ
ಅಜ್ಜನ ಮನೆಯ ಅಂಗಳಕ್ಕೆ ಕಾಲಿಟ್ಟಾಗ
ಅಲ್ಲೇ ಆಟವಾಡುತ್ತಿರುವ ಬಾವ ಅತ್ತಿಗೆಯರು
"ಅದೇ! ನೋಡು, ಯಾರು ಬಂದ!" ಎಂದು ಕೂಗಿ
ತುಂಬಿದ ಮನೆಯವರನ್ನು ಕರೆಯುತ್ತಿದ್ದ ಕಾಲ...

ಹಾಗೂ ಒಂದು ಕಾಲ ಇತ್ತು...

ಮತ್ತೆ ಬಾ ಎಂದು ಗೋಗರೆದು ಕರೆದರೂ ಬಾರದ ಕಾಲ!